Wednesday, November 3, 2010

ಗುಬ್ಬಚ್ಚಿ ಗೂಡಿನಲ್ಲಿ..

"ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ..
ಆಡೋಣ ನಾವು ಅಲ್ಲಿ ಕುಚ್ಚಿ ಕುಚ್ಚಿ..
ಇಂಥ ನೂರು, ಆಸೆ ಯಾರು, ತಂದೋರು ಈ ಪ್ರೀತಿಲೀ ಹೇ ಯೇ.."

ಕನ್ನಡದ 'ಬಿಂದಾಸ್' ಚಿತ್ರದಲ್ಲಿ ಮೂಡಿಬಂದಿರುವ ಗುರುಕಿರಣ್ ರವರ ಈ ಹಾಡು ಬಹಳ ಸಮಯ ನಮ್ಮ ಪಡ್ಡೆ ಹುಡುಗರ ಮನದಲ್ಲಿ ನಲಿದಾಡಿದ್ದಂತೂ ನಿಜ! ಇಂದಿಗೂ ಸಹ ನಾವು ಬೆಂಗಳೂರಿನ ಯಾವುದೇ FM ತರಂಗಾಂತರದಲ್ಲಿ ಹಾಡುಗಳನ್ನು ಕೇಳುತ್ತಿದ್ದರೆ, ಕನಿಷ್ಟ ದಿನಕ್ಕೊಂದು ಬಾರಿಯಾದರೂ ಈ ಹಾಡನ್ನು ಪ್ರಸಾರ ಮಾಡದೆ ಇರಲಾರರು. ಈ ಹಾಡನ್ನು ಕೇಳಿದಾಗಲೆಲ್ಲಾ ನನಗೆ ನನ್ನ ಬಾಲ್ಯದ ದಿನಗಳು ನೆನಪಾಗಿ, ನನ್ನ ಕಣ್ಮುಂದೆ 'ಗುಬ್ಬಚ್ಚಿ'ಗಳೇ ಬಂದುಬಿಡುತ್ತವೆ!

House Sparrow (Image © 'Birds Amore')
ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಬಿಂದಾಸ್ ಚಿತ್ರದ ಹಾಡನ್ನು ಕೇಳಿದಮೇಲೆಯೇ ನನಗೆ ಮತ್ತೆ ಗುಬಚ್ಚಿಗಳ ನೆನಪಾದದ್ದು! ನನ್ನ ಬಾಲ್ಯದ ದಿನಗಳಲ್ಲಿ ನಮ್ಮ ಬೆಂಗಳೂರು ನಗರ-ಜೀವನದ ಅವಿಭಾಜ್ಯ ಅಂಗದಂತಿದ್ದ ಈ ಪುಟ್ಟ ಗುಬ್ಬಚ್ಚಿಗಳು ಇಂದು ಇನ್ನಿಲ್ಲದಂತೆ ಕಾಣೆಯಾಗಿಹೋಗಿವೆ ಎಂಬ ವಿಷಯ ಆಘಾತಕಾರಿಯಾದರೂ, ಕಟುಸತ್ಯ. ಎಲ್ಲಿ ಹೋದವು ಈ ಗುಬ್ಬಿಗಳು? ಇಂದು ಇವುಗಳನ್ನು ನಮ್ಮ ಬೆಂಗಳೂರಿನ ಪರಿಸರದಲ್ಲಿ ಹುಡುಕುವ ನನ್ನ ಪ್ರಯತ್ನ ಫಲಕಾರಿಯಾಗಲಿಲ್ಲ ಎಂದು ಬೇರೆ ನಿಮಗೆ ಹೇಳಬೇಕಾದ ಅವಶ್ಯಕತೆಯಿಲ್ಲ!

ಚೆನ್ನಾಗಿ ನೆನಪಿದೆ, ನಾನು ಚಿಕ್ಕವನಿದ್ದಾಗ ಮನೆಯ ಸುತ್ತೆಲ್ಲಾ ಈ ಗುಬ್ಬಿಗಳದ್ದೇ ಕಾರುಬಾರು. ಅಕ್ಕಿಯಿಂದ ಆಯ್ದ ಭತ್ತಗಳನ್ನು ಅಮ್ಮ ಕೆಳಗೆ ಹಾಗುವುದೇ ತಡ, ನಾ ಮುಂದು ತಾ ಮುಂದು ಎಂದು ಗುಂಪು-ಗುಂಪಾಗಿ ಬಂದು ತಂತಮ್ಮಲ್ಲೇ ಸ್ಪರ್ಧೆಗಿಳಿದುಬಿಡುತ್ತಿದ್ದವು ಗುಬ್ಬಿಗಳು. ಮಹಡಿಯ ಮೇಲೆ ಅಥವಾ ಸಜ್ಜದ ಮೇಲೆ ಕಾಳುಗಳನ್ನು ಬಿಸಿಲಿನಲ್ಲಿ ಒಣಗಿಸಲು ಹಾಕಿದೆವೆಂದರೆ ಮುಗಿದೇ ಹೋಯಿತು, ಕೋಲು ಹಿಡಿದ ಕಾವಲುಗಾರರಿಲ್ಲದ ಹೊರೆತು ಇವುಗಳ ಹಾವಳಿ ಹೇಳತೀರದು. ಗುಬ್ಬಿಗಳಿಗೆ ಧಾನ್ಯವೇ ಬೇಕು ಎಂದೇನೂ ಇರಲಿಲ್ಲ; ಕೆಲವೊಮ್ಮೆ ಅಲ್ಲಲ್ಲಿ ಚೆಲ್ಲಿರುತ್ತಿದ್ದ ಅನ್ನವನ್ನು ಹೆಕ್ಕಿ ತಮ್ಮ ಗೂಡಿನಲ್ಲಿರುವ ಮುದ್ದು ಕಂದಮ್ಮಗಳಿಗೆ ನೀಡುತ್ತಿದ್ದ ದೃಶ್ಯವನ್ನು ನೋಡಿಯೇ ಕಣ್ತನಿಯಬೇಕು.

ದಿನಗಳು ಕಳೆದಂತೆ, ಬೆಂಗಳೂರು ನಗರವು ಮಿತಿಮೀರಿ ಬೆಳೆಯುತ್ತಲೇ ಇದೆ. ಅಂಗೈ ಅಗಲದ ಭೂಮಿಗೆ 'ಚಿನ್ನ'ದ ಬೆಲೆ! ಹಸಿರು ಮರಗಳನ್ನು ಉರುಳಿಸಿ ಎದ್ದು ನಿಂತಿರುವ 'ಕಾಂಕ್ರೀಟ್ ಕಾಡು'ಗಳು. 'ಶೆಟ್ಟರ' ಅಂಗಡಿಗಳನ್ನು ಮೂಲೆಗುಂಪಾಗಿಸಿರುವ 'ಮಂತ್ರಿ ಮಾಲ್'ಗಳು. BMTC ಬಸ್ಸುಗಳಿಗೆ ಬ್ರೇಕ್ ಹಾಕಲು ಬರುತ್ತಿರುವ 'ನಮ್ಮ ಮೆಟ್ರೋ' ರೈಲುಗಳು. ಬೆಣ್ಣೆ ಗುಲ್ಕನ್ ರುಚಿಯನ್ನು ಮರೆಸುತ್ತಿರುವ 'ಪಿಜಾ-ಬರ್ಗರ್'ಗಳು. ಕಾಲುದಾರಿಗಳನ್ನು ಅಲಂಕರಿಸುತ್ತಿರುವ 'ಫ್ಲಯ್ ಓವರ್'ಗಳು. ಬೈಸಿಕಲ್ ಗಳನ್ನು ತುಕ್ಕು ಹಿಡಿಸಿರುವ 'ಬೈಕ್'ಗಳು. ಹಿತವಾದ ತಂಗಾಳಿಯನ್ನು ಕೆಡಿಸಿರುವ 'ವಿಷಕಾರಕ ಅನಿಲ'ಗಳು. ಸಿಹಿಯಾದ ನಿದ್ದೆ ಕೆಡಿಸಿರುವ 'ನೈಟ್ ಶಿಫ್ಟ್'ಗಳು. ಇವೆಲ್ಲವುಗಳನ್ನು ಅರಗಿಸಿಕೊಳ್ಳಲು ಮನುಷ್ಯರಾದ ನಾವೇ ಹೆಣಗಾಡುತ್ತಿರುವಾಗ, ಪಾಪ ಆ ಪುಟ್ಟ ಪಕ್ಷಿಗಳು ಹೇಗೆ ತಾನೇ ಸಹಿಸಿಕೊಂಡಾವು? ಬೆಂಗಳೂರಿನ ತಮ್ಮ ಗೂಡುಗಳನ್ನು ಬಿಟ್ಟ ಗುಬ್ಬಿಗಳು ಶಾಶ್ವತವಾಗಿ ಹೊರಟೇಹೋದವು, ಹಿಂತಿರುಗಿ ಬರಲು ದಾರಿ ತಿಳಿಯದಷ್ಟು ದೂರ..

11 comments:

  1. ನಾನು ಚಿಕ್ಕವನಾಗಿದ್ದಾಗ ಪ್ರತಿ ಮನೆಯಲ್ಲೂ ಗುಬ್ಬಿ ಗೂಡಿರುತ್ತಿದ್ದುದು ನೆನಪಿದೆ. ಆದರೆ ಇಂದು ಬೆಂಗಳೂರಷ್ಟೇ ಅಲ್ಲ, ಯಾವ ಊರಿನಲ್ಲೂ ಗುಬ್ಬಿಗಳ ಕಲರವ ಕಾಣಿಸುತ್ತಿಲ್ಲ.

    ReplyDelete
  2. The present study suggests that retaining old
    hatched roof buildings and native buildings
    in the city are necessary for sustaining
    house sparrow populations.see article http://www.ias.ac.in/currsci/feb252008/446.pdf

    ಇದು ಸಾಧ್ಯಾನಾ? ಮಾಲ್ ಗಳಲ್ಲಿ ಗುಬ್ಬಿ ಗೂಡಿಗೆ ಜಾಗ, ಗಾಜಿನ ಗೋಡೆಗಳ ಹಿಂದೆ? ಕೆ. ಆರ್ ಮಾರ್ಕೆಟ್ನಲ್ಲಿ ಇನ್ನೂ ಗುಬ್ಬಿಗಳಿರೋದನ್ನ ನಾನ್ ನೋಡಿದೀನಿ ಎಂಬುದೇ ಸದ್ಯಕ್ಕೆ ನಂಗೆ ಖುಷಿ ಕೊಡೋ ವಿಷ್ಯ.

    ReplyDelete
  3. ಮಹೇಶ್, ಮೊದಲನೇಯದಾಗಿ ನನ್ನ ಬ್ಲಾಗ್ ಗೆ ನಿಮಗೆ ಆತ್ಮೀಯ ಸ್ವಾಗತ!
    ಹೌದು, ಗುಬ್ಬಿಗಳು ನಗರ ಜೀವನದಿಂದ ಬೇಸತ್ತಂತೆ ಕಾಣುತ್ತವೆ. ಅವು ಈಗ ನಮ್ಮ ನಡುವೆ ಇಲ್ಲದಿರುವುದಕ್ಕೆ ಪರೋಕ್ಷವಾಗಿ ನಾವೇ ಕಾರಣವೇನೋ..?

    ನವೀನ್, ನೀವು ಒದಗಿಸಿಕೊಟ್ಟ ಮಾಹಿತಿಗೆ ಧನ್ಯವಾದಗಳು!
    ಕೃ. ರಾ. ಮಾರುಕಟ್ಟೆಯಲ್ಲಿ ಗುಬ್ಬಚ್ಚಿಗಳು ಸಿಗುತ್ತವೆಯೇ? ಮತ್ತೊಮ್ಮೆ ಆ ಕಡೆ ಹೋದಾಗ ಖಂಡಿತಾ ಹುಡುಕುತ್ತೇನೆ :o)

    ReplyDelete
  4. ಪ್ರಶಾಂತ್ , ನೀನು ಹೇಳಿದ ಹಾಗೆ ಗುಬ್ಬಚ್ಚಿಗಳು concrete ಕಟ್ಟಡಗಳಲ್ಲಿ ಕಾಣದೇ ಇರಬಹುದು !ಆದರೆ ನಾನು ಅವುಗಳನ್ನು ಚಿಕ್ಕಂದಿನಿಂದಲೂ ರಾಗಿ ಹಾಗು ಬತ್ತದ ಕಾಲುಗಳನ್ನು ತಿನ್ನಲು ಬಂದಾಗ ಹೊದಿಸುತ್ತಾ ಗಮನಿಸಿದ್ದೇನೆ !ಈಗಲೂ ಹಳ್ಳಿಗಳ ಹೆಂಚಿನ ಮನೆ ಮತ್ತು ಗುಡಿಸಿಲುಗಳಲ್ಲಿ citymarket ನ ದವಸದಾನ್ಯದ ಅಂಗಡಿಗಳ ಹತ್ತಿರ ಇನ್ನು ನೋಡಬಹುದಾಗಿದೆ !.ಇವುಗಳ ಸಂಖ್ಯೆ ಕಡಿಮೆಯಾಗಿರಬಹುದೇ ಹೊರತು ಇವು ಪೂರ್ತಿಯಾಗಿ ನಶಿಸಿ ಹೋಗಿಲ್ಲ ?.ಪಕ್ಷಿಪ್ರಿಯರು cubbonpark , ಲಾಲಭಾಗ್ ಹಾಗು ಇತರೆ ಉದ್ಯಾನ ವನಗಳಲ್ಲಿ ಇವುಗಳಿಗೆ ನಿತ್ಯವೂ ಕಾಳುಗಳನ್ನು ಹಾಕುತ್ತಾರೆಂದು ಪತ್ರಿಕೆ ಯಲ್ಲಿ ಓದಿದ ನೆನಪಿದೆ .ಇಗಲೂ ಕೂಡ ನಮ್ಮ ಫಾರ್ಮನ ಷೆದ್ದುಗಳಲ್ಲಿ ಇವು ಗೂಡು ಕಟ್ಟಿಕೊಂಡು ವಾಸಿಸುತ್ತಿರುವುದನ್ನು ಗಮನಿಸಬಹುದು .ಈಗ ಇವು ಹಳ್ಳಿಗಳ ಕಡೆ ಹೆಚ್ಚ್ಹಾಗಿ ಕಂಡು ಬರುತ್ತಿದ್ದು , ಇನ್ನು ಮುಂದೆ ಮರಗಳಕಡಿತ,ದವಸದಾನ್ಯಗಳನ್ನು ಬೆಳೆಯುವ ಹೊಲಗದ್ದೆಗಳು ಕಡಿಮೆಯಾದಂತೆಲ್ಲ ಅವುಗಳ ಸಂಖ್ಯೆ ಕಡಿಮೆಯಾದರೂ ಆಶ್ಚರ್ಯವಿಲ್ಲ .

    ReplyDelete
  5. ಅಂದು: ಬೇಡವೆಂದರೂ ಗುಬ್ಬಿಗಳು ನಮ್ಮ ಮನೆಯಂಗಳಕ್ಕೆ ಬರುತ್ತಿದ್ದವು.
    ಇಂದು: ಹುಡುಕಿಕೊಂಡರೂ ಮೆನೆಯ ಸುತ್ತೆಲ್ಲೂ ಗುಬ್ಬಿಗಳು ಕಾಣಸಿಗವು.
    ಇಷ್ಟೇ ನೋಡಿ ಸರ್ ವ್ಯತ್ಯಾಸ..

    ReplyDelete
  6. ನಿತ್ಯ ಸುಮಂಗಲಿ ಹೆಣ್ಣು ಗುಬ್ಬಿ. ಇದನ್ನು ಓದಿ.
    http://sampada.net/article/22110

    ReplyDelete
  7. ನವೀನ್, ಅತ್ಯುತ್ತಮ ಬರವಣಿಗೆಗೆ ನನ್ನನ್ನು ನಿರ್ದೇಶಿಸಿದ್ದಕ್ಕೆ ಧನ್ಯವಾದಗಳು. ಪಕ್ಷಿ ಪ್ರಪಂಚದ ಹಲವು ಆಯಾಮಗಳನ್ನು ನಾನು ತಿಳಿದುಕೊಂಡೆ. ಇದರಿಂದ ಪಕ್ಷಿಗಳ ಬಗೆಗಿನ ನನ್ನ ಕುತೂಹಲ ಮತ್ತಷ್ಟು ಹೆಚ್ಚಿದೆ :o)

    ReplyDelete
  8. ಗುಬ್ಬಚ್ಚಿ ಗೂಡಿನಲ್ಲಿ i ಕದ್ದು ಮುಚ್ಚಿ ಹಾಡೋಣ ನವಿ ಅಲ್ಲಿ ಕಚ್ಚಿ ಕಚ್ಚಿ.ಕೇಳಲು ಸುಂದರ ಹಾದರೆ ಹಕಾರಿಸಲು ಹಾಗುವುದಿಲ್ಲ.
    ಇದೆ ಗುಂಗಿನಲ್ಲಿ ನೀವುಸಹ ಮದುವೆಯಾಗಿ ಸಣ್ಣದೊಂದು ಗೂಡು ಕಟ್ಟಿ ನೋರುಕಳ ಸುಖವಾಗಿ ಬಾಳಿರಿ. ದೇವರು ಒಳ್ಳೇದು ಮಾಡಲಿ.

    ReplyDelete
  9. ಧನ್ಯವಾದಗಳು ಚಂದು :o)

    ReplyDelete
  10. ಚಂದದ ಬರಹ ಪ್ರಶಾಂತ.. ನಮ್ಮ ಹಳ್ಳಿಯಲ್ಲಿ ನನ್ನ ಗೆಳೆಯನೊಬ್ಬ ಸುಮಾರು ೧೫೦ ಗುಬ್ಬಿಗಳಿಗೆ ಗೂಡಿನ ವ್ಯವಸ್ಥೆ ಮಾಡಿ ಅದರೊಡನೆ ಬದುಕುತಿದ್ದಾನೆ..

    ನಾನು ನನಗೆ ಅನಿಸಿದ್ದನ್ನ ಬರೆದಿದ್ದೀನಿ.. ಸಮಯವಿದ್ದಾಗ ಕಣ್ಣುಹಾಯಿಸಿ..
    http://walkofthoughts.blogspot.com/2011/03/missing-from-few-years-sparrow.html

    ReplyDelete
  11. ಧನ್ಯವಾದಗಳು :o)

    ನಿಮ್ಮ ಗೆಳೆಯರನ್ನು ಹಾಗೂ ಅಲ್ಲಿರುವ ಗುಬ್ಬಿಗಳನ್ನು ಒಮ್ಮೆ ಭೇಟಿ ಮಾಡುವಾಸೆ. ಸಾಧ್ಯವಾದೀತೆ ಕಾದು ನೋಡೋಣ!

    ReplyDelete

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!