Monday, July 19, 2010

ಓದು - ಬರಹ

ಇಂದಿಗೆ ಸರಿಯಾಗಿ ಎರಡು ತಿಂಗಳ ಹಿಂದೆ, ಈ ಬ್ಲಾಗ್ ನಲ್ಲಿ ಬರೆದ ನನ್ನ ಪ್ರಪ್ರಥಮ ಬರವಣಿಗೆಗೆ ಹಿರಿಯರೊಬ್ಬರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದರು:

"To write some thing, you have to read many things I mean writings of great authors"

ಮೇಲಿನ ವಾಕ್ಯವನ್ನು ಓದುತ್ತಿದ್ದಂತೆಯೇ ತಿಳಿಯುತ್ತದೆ, ಅದು ಅವರ ಅನುಭವದ ಮಾತುಗಳೆಂದು. ಹೌದು, ಸಾಮಾನ್ಯವಾಗಿ ಆಗುವುದೇ ಹೀಗೆ. ಓದಿನ ಗೀಳು ಹಚ್ಚಿಕೊಂಡವರು, ತಮ್ಮ ಸದಭಿರುಚಿಗನುಗುಣವಾಗಿ ಹತ್ತು-ಹಲವು ವಿಭಿನ್ನರ ಬರವಣಿಗೆಗಳನ್ನು ಓದದೆ ಇರಲಾರರು. ಹಾಗೆಯೇ, ಹೆಚ್ಚು ಹೆಚ್ಚು ಓದಿದಂತೆಲ್ಲ ಅವರವರ ಭಾವಗಳಿಗೆ ತಕ್ಕಂತೆ, ಅವರವರ ಕಲ್ಪನೆಗೆ ತಕ್ಕಂತೆ, ಅವರಿಗರಿವಿಲ್ಲದೇ ಒಬ್ಬ 'ಬರಹಗಾರ' ಅವರೊಳಗೆಯೇ ಹುಟ್ಟಿಕೊಂಡಿರುತ್ತಾನೆ. ಓದಿ ಶೇಖರಿಸಿಟ್ಟ ಎಲ್ಲಾ ವಿಷಯ-ಅನುಭಾವಗಳು ಮನಸ್ಸಿನಲ್ಲೇ ಉಳಿಯದೆ, ಬರವಣಿಗೆಯ ರೂಪದಲ್ಲಿ ಬಿತ್ತರಗೊಳ್ಳದೆ ಇರುವುದಿಲ್ಲ.

ಬುದ್ಧಿ ತಿಳಿದಾಗಿನಿಂದಲೂ ನಾನು ಓದಿವುದರ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದವನಲ್ಲ. ಶಾಲೆ-ಕಾಲೇಜುಗಳಲ್ಲಿ ಅನ್ಯ ಮಾರ್ಗವಿಲ್ಲದೇ, ಪರೀಕ್ಷೆಯ ದೃಷ್ಟಿಯಿಂದ ಪುಸ್ತಕ ಹಿಡಿಯುತ್ತಿದ್ದುದು ನನ್ನ ಪ್ರವೃತ್ತಿ. ಕೆಲವೊಮ್ಮೆ ಓದಲು ಕುಳಿತರೆ, ವಾಕ್ಯದ ಅರ್ಥ ಗ್ರಹಿಸುವುದಷ್ಟಕ್ಕೆ ಮಾತ್ರ ಸೀಮಿತಗೊಳ್ಳುತ್ತಿದ್ದೆ. ಅಂದರೆ, ಒಂದು ವಾಕ್ಯದ ಪ್ರತಿಯೊಂದು ಪದವನ್ನೂ ಓದದೆ, ಬರಿಯ 'ಕೀಲಿ ಪದ' (key words) ಗಳನ್ನು ಮಾತ್ರ ಓದುತ್ತಿದ್ದೆ. ಹೀಗೆ ಓದುವುದನ್ನು 'speed reading' ಎಂದು ಕರೆಯುತ್ತಾರೆ; ಇದು ಪ್ರಯೋಜನಕಾರಿಯೂ ಹೌದೆಂದು ಕೆಲವೆಡೆ ಪ್ರತಿಪಾದಿಸಲಾಗಿದೆ.

ಇತ್ತೀಚಿಗೆ, ಇದೇ ಬ್ಲಾಗ್ ನಲ್ಲಿ ಬರೆದ ನನ್ನದೇ ಬರವಣಿಗೆಯೊಂದನ್ನು ಓದಿದೆ. ಎಂದಿನಂತೆ 'speed reading'. ಸಂಪೂರ್ಣ ಬರವಣಿಗೆ ಓದಿದ ಮೇಲೆ ನನಗನ್ನಿಸಿತು "ಮನಸ್ಸಿನಲ್ಲಿದ್ದ ಭಾವನೆಗಳು ಪ್ರಭಾವಶಾಲಿಯಾಗಿ ಬರವಣಿಗೆಯಲ್ಲಿ ಮೂಡಿಲ್ಲವೇನೋ..". ಮತ್ತೊಮ್ಮೆ, ನಿಧಾನವಾಗಿ, ತಾಳ್ಮೆಯಿಂದ, ಪ್ರತಿಯೊಂದು ಪದವನ್ನೂ ಸಹ ಮನಸ್ಸಿಟ್ಟು ಓದಿದೆ - ಬರವಣಿಗೆ ಅತ್ಯಂತ ಪ್ರಭಾವಶಾಲಿ ಎನಿಸಿತು! "ನೋಡುವ ಕಣ್ಣಿನಲ್ಲಿ ಅಂದವಿದೆ" ಎನ್ನುವ ಹಾಗೆ, "ಓದುವ ಮನಸ್ಸಿನಲ್ಲಿ ಅರ್ಥವಿರಬಹುದು" ಅಂದುಕೊಂಡೆ.

ಅಂದಿನಿಂದೀಚೆಗೆ ಓದುವ ನನ್ನ ಶೈಲಿ ಬದಲಾಗಿ, ತನ್ನ ವೇಗವನ್ನು ಕಳೆದುಕೊಂಡಿದೆ. ಓದುವಾಗ, ಪ್ರತಿಯೊಂದೂ ಪದವನ್ನು ಸಂಪೂರ್ಣ ತನ್ಮಯತೆಯಿಂದ ಓದುತ್ತೇನೆ. ಇದರಿಂದ ಈಗಿನ ನನ್ನ ಓದು ಇಷ್ಟೂ ದಿನಗಳಲ್ಲಿ ಕಾಣದ ಒಂದು ವಿಶೇಷ ಅನುಭವ-ಆನಂದವನ್ನು ನನ್ನಲ್ಲಿ ಉಂಟುಮಾಡುತ್ತಿದೆ; ಓದುವ ಗೀಳು ಹಚ್ಚಿಕೊಂಡುಬಿಟ್ಟಿದ್ದೇನೆ!

ಬರೆಯುತ್ತಾ ಬರೆಯುತ್ತಾ ನನಗರಿವಿಲ್ಲದೆಯೆ ನನ್ನೊಳಗೊಬ್ಬ 'ಓದುಗ' ಹುಟ್ಟಿಕೊಂಡಿರುವುದಂತೂ ಸತ್ಯ. ಸಾಮಾನ್ಯವಾಗಿ, ಓದಿನಿಂದ ಬರಹ ಎಂಬರ್ಥದಲ್ಲಿ 'ಓದು-ಬರಹ' ಎನ್ನುವುದಾದರೆ; ನನ್ನ ಮಟ್ಟಿಗೆ ಅದು 'ಬರಹ-ಓದು' ಎಂದಾಗಬೇಕಲ್ಲವೇ? ಎಲ್ಲಾ ಅದಲು-ಬದಲು!!

No comments:

Post a Comment

ಖಂಡಿತಾ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಧನ್ಯವಾದಗಳು!
Please post your comments. Thank you!